2 ತಿಂಗಳು ಮತ್ಸ ್ಯಪ್ರಿಯರಿಗೆ ಕಾದಿದೆ ನಿರಾಸೆ
ಮಲ್ಪೆ: ಮೀನಿನ ಖಾದ್ಯ ಇಲ್ಲದೇ ಊಟನೇ ಸೇರೊಲ್ಲ ಎನ್ನುವವರಿಗೆ ಬೇಸರದ ಸಂಗತಿ ಇಲ್ಲಿದೆ.
ಜೂ. 15ರಿಂದ ಸುಮಾರು 2 ತಿಂಗಳ ಕಾಲ ಕರ್ನಾಟಕದ ಮಾರುಕಟ್ಟೆಗಳಲ್ಲಿ ಕಡಲ ಮೀನು ಸಿಗುವುದಿಲ್ಲ. ಆದ್ದರಿಂದ ಮೀನು ಪ್ರಿಯರು ಇಷ್ಟು ದಿನಗಳ ಕಾಲ ಮೀನಿಲ್ಲದೇ ಊಟ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಪ್ರತಿವರ್ಷ ಮಳೆಗಾಲದಲ್ಲಿ ಜೂನ್ 15ರಿಂದ ಜುಲೈ 31ರವರೆಗೆ ಕರ್ನಾಟಕದ ಸಮುದ್ರ ತೀರದ 3 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ದೇಶದ ಎಲ್ಲ ಸಮುದ್ರ ತೀರದ ರಾಜ್ಯಗಳಲ್ಲಿಯೂ ಈ ನಿಷೇಧ ಜಾರಿಗೆ ಬರುತ್ತದೆ. ಆದರೆ ನಿಷೇಧದ ಕಾಲ ಮತ್ತು ಅವಧಿ ಬೇರೆಬೇರೆ ಇರುತ್ತದೆ.
ಮಳೆಗಾಲದಲ್ಲಿ ಸಮುದ್ರ ತೀರಾ ಅಪಾಯಕಾರಿಯಾಗಿರುತ್ತದೆ. ಯಾಂತ್ರೀಕೃತ ಬೋಟುಗಳಲ್ಲಿ ಮೀನುಗಾರಿಕೆ ನಡೆಸುವ ಬೋಟುಗಳು ಬಂದರು ಬಿಟ್ಟು 400- 600 ಕಿಮಿ ದೂರದವರೆಗೆ (ಆಳ ಸಮುದ್ರ) ಮೀನುಗಾರಿಕೆಗೆ ತೆರಳಿದರೇ 5- 8 ದಿನಗಳ ಕಾಲ ಸಮುದ್ರದಲ್ಲಿಯೇ ಇರುತ್ತವೆ. ಹಿಂದೆಲ್ಲಾ ಈ ಸಂದರ್ಭದಲ್ಲಿ ಸಮುದ್ರದಲ್ಲಿ ಮಳೆಗಾಳಿಗೆ ಪ್ರಾಣಾಪಾಯಗಳಾದ ಬೇಕಾದಷ್ಟು ಘಟನೆಗಳೂ ನಡೆದಿವೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮಳೆಗಾಲದಲ್ಲಿ ಆಳಸಮುದ್ರ ಮೀನುಗಾರಿಕೆಗೆ 3 ತಿಂಗಳ ನಿಷೇಧ ವಿಧಿಸಿತ್ತು.
ಕರ್ನಾಟಕದಲ್ಲಿ 57 ದಿನ: ನಂತರ ಮೀನುಗಾರರ ಒತ್ತಾಯದ ಮೇರೆಗೆ ಈ ನಿಷೇಧದ ಅವಧಿ ಕಡಿತಗೊಳಿಸಲಾಯಿತು. ಪ್ರಸ್ತುತ ಕರ್ನಾಟಕದಲ್ಲಿ 57 ದಿನ, ಕೇರಳದಲ್ಲಿ ಜೂ. 15ರಿಂದ 47 ದಿನ, ಗೋವಾದಲ್ಲಿ ಜೂ. 1ರಿಂದ 61 ದಿನ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಜೂ.1ರಿಂದ 60 ದಿನಗಳ ಮೀನುಗಾರಿಕೆ ನಿಷೇಧ ಜಾರಿಗೊಳ್ಳುತ್ತದೆ. ತಮಿಳುನಾಡು, ಪಾಂಡಿಚೇರಿ ಮತ್ತು ಪಶ್ಚಿಮ ಬಂಗಾಲದಲ್ಲಿ ಏ.15ರಿಂದ 45 ದಿನಗಳ ಆಳಸಮುದ್ರ ಮೀನುಗಾರಿಕೆಯನ್ನು ನಿಲ್ಲಿಸಲಾಗುತ್ತದೆ.
ಏಕರೂಪ ಜಾರಿಗೆ ಒತ್ತಾಯ: ಈ ನಿಷೇಧದ ಅವಧಿಯನ್ನು ದೇಶಾದ್ಯಂತ ಏಕರೂಪದಲ್ಲಿ ಜಾರಿಗೊಳಿಸಬೇಕು, ನಿಷೇಧದಿಂದ ಮೀನುಗಾರರು ಒಂದೆರಡು ತಿಂಗಳು ನಿರುದ್ಯೋಗಿಗಳಾಗುತ್ತಾರೆ. ಆದ್ದರಿಂದ ನಿಷೇಧ ರದ್ದುಗೊಳಿಸಬೇಕು ಅಥವಾ ಅವಧಿಯನ್ನು ಇನ್ನೂ ಕಡಿತಗೊಳಿಸಬೇಕು ಎನ್ನುವ ಒತ್ತಾಯ ಕೂಡ ಮೀನುಗಾರರಿಂದ ಇದೆ.
ಉಲ್ಲಂಘಿಸಿದರೆ ಪರಿಹಾರವಿಲ್ಲ: ಈ ನಿಷೇಧಾಜ್ಞೆ ಉಲ್ಲಂಘಿಸುವ ಮೀನುಗಾರರ ಜೀವಕ್ಕೆ, ಲಕ್ಷಾಂತರ ರು. ಬೆಲೆ ಬಾಳುವ ಬೋಟು, ಬಲೆಗಳಿಗೆ ಸಮುದ್ರದಲ್ಲಿ ಏನಾದರೂ ಅಪಾಯ ಉಂಟಾದಲ್ಲಿ ಸರ್ಕಾರದಿಂದ ಯಾವುದೇ ರೀತಿ ಪರಿಹಾರವಾಗಲಿ, ವಿಮೆಯಾಗಲಿ ದೊರೆಯುವುದಿಲ್ಲ. ಮಾತ್ರವಲ್ಲ ಸರ್ಕಾರದಿಂದ ಮೀನುಗಾರರ ಬೋಟುಗಳಿಗೆ ನೀಡಲಾಗುವ ಡಿಸೇಲ್ ಮೇಲಿನ ಸಬ್ಸಿಡಿಯನ್ನು ನೀಡಲಾಗುವುದಿಲ್ಲ.
ಈ 57 ದಿನ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮೀನುಗಾರಿಕಾ ವೃತ್ತಿಯಲ್ಲಿ ಅನ್ನ ಕಂಡುಕೊಳ್ಳುತ್ತಿರುವ ಲಕ್ಷಾಂತರ ಮಂದಿ ನಿರುದ್ಯೋಗಿಗಳಾವುದಂತೂ ಸತ್ಯ. ಆದರೇ ಇದು ಅನಿವಾರ್ಯ. ನುರಿತ ಮೀನುಗಾರರು ಈ ನಿಷೇಧದ ಅವಧಿಯಲ್ಲಿ ಬೋಟು- ಬಲೆ ರಿಪೇರಿಯಲ್ಲಿ ತೊಡಗಿಕೊಳ್ಳುತ್ತಾರೆ.
ಈಗ ಮೀನುಗಾರಿಕೆ ನಿಲ್ಲಿಸದಿದ್ದರೆ ಶಾಶ್ವತ ನಿಲ್ಲಿಸಬೇಕಾದೀತು
ಮುಂಗಾರು ಆರಂಭದ ದಿನಗಳು ಸಮುದ್ರದಲ್ಲಿ ವಿವಿಧ ಜಾತಿಯ ಮೀನುಗಳು ಮೊಟ್ಟೆ ಇಟ್ಟು ಮರಿ ಮಾಡುವ ಕಾಲ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೇ ಹೊಟ್ಟೆಯಲ್ಲಿ ಸಾವಿರಾರು ಮೊಟ್ಟೆಗಳನ್ನು ಹೊತ್ತಿರುವ ಮೀನುಗಳು, ಮೊಟ್ಟೆಗಳು, ಮೊಟ್ಟೆಯಿಂದ ಆಗ ತಾನೆ ಹೊರಬಂದಿರುವ ಮರಿಮೀನುಗಳು ಬಲೆಗೆ ಬಿದ್ದು ಸಾಯುವುದರಿಂದ, ಮುಂದೆ ಮೀನಿನ ಸಂತತಿಯೇ ನಾಶವಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿಯಾದರೂ ಮೀನು ಹಿಡಿಯುವುದನ್ನು ಕಡ್ಡಾಯವಾಗಿ ನಿಲ್ಲಿಸಲೇಬೇಕು. ಇಲ್ಲದಿದ್ದಲ್ಲಿ ಶಾಶ್ವತವಾಗಿ ಮೀನು ಹಿಡಿಯುವುದನ್ನು ನಿಲ್ಲಿಸಬೇಕಾದೀತು.
-ಸುಭಾಶ್ಚಂದ್ರ ಎಸ್. ವಾಗ್ಳೆ